ಗಣೇಶ್-ಅಮೂಲ್ಯ 'ಮಾದೇಶ-ಐಸೂ' ಹೊಸ ಲವ್‌ಸ್ಟೋರಿ?
ಯಾವುದೋ ಒಂದು ಕಾರಣಕ್ಕೆ "ಇವ್ಯಾವುದೂ ಬೇಡ, ದೂರ ಉಳಿಯುತ್ತೇನೆ" ಎಂದು ಶಪಥ ಮಾಡಿದವರಲ್ಲಿ ಅಮೂಲ್ಯರೇ ಮೊದಲಿಗರಲ್ಲ. ಒಂದೊಮ್ಮೆ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಕೂಡ ಇದೇ ರೀತಿಯ ವೈರಾಗ್ಯದ ಮಾತುಗಳನ್ನಾಡಿದ್ದರು. ಅದೆಲ್ಲ ಯಾಕೆ, ನಿವೃತ್ತ ನಿರ್ದೇಶಕನೆನಿಸಿಕೊಂಡು ಮೊನ್ನೆ ಮೊನ್ನೆಯಷ್ಟೇ ವಾಪಸ್ಸಾಗಿರುವ ಅಮೂಲ್ಯ 'ಗಾಡ್‌ಫಾದರ್' ಎಸ್. ನಾರಾಯಣ್ ನಮ್ಮ ಮುಂದಿಲ್ವೇ?
ಈಗ ನಾವು ಹೇಳಲು ಹೊರಟಿರೋದು, ನಮ್ಮ 'ಚೆಲುವಿನ ಚಿತ್ತಾರ'ದ ಐಸೂ ಮತ್ತು ಮಾದೇಶ ಮತ್ತೆ ಜತೆಯಾಗ್ತಿದ್ದಾರೆ ಎಂಬ ಗಾಂಧಿನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿರುವ ಸುದ್ದಿಯ ಬಗ್ಗೆ. ಅಂದ್ರೆ ಗೊತ್ತಾಯ್ತಲ್ಲ; ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಹೀರೋ-ಹೀರೋಯಿನ್ ಆಗಿ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಆ ಮೂಲಕ ಅಮೂಲ್ಯ ತನ್ನ ನಿಷೇಧವನ್ನು ತಾನೇ ತೆರವುಗೊಳಿಸುತ್ತಿದ್ದಾರೆ.
ಹಾಗಂತ ತುಂಬಾ ಜನ ಮಾತನಾಡಿಕೊಳ್ತಿದ್ದಾರೆ. ಅದನ್ನೇ ನಂಬೋದಾದ್ರೆ, ಇವರಿಬ್ಬರ ಭವಿಷ್ಯದ ಪ್ರಾಜೆಕ್ಟನ್ನು ನಿರ್ದೇಶಿಸುತ್ತಿರುವುದು 'ಶಿಶಿರ' ಖ್ಯಾತಿಯ ಮಂಜು ಸ್ವರಾಜ್. 'ಗೋವಿಂದಾಯ ನಮಃ' ಚಿತ್ರದಲ್ಲಿ ಒಂದಷ್ಟು ಕಾಸು ಮಾಡಿಕೊಂಡ ಸುರೇಶ್ ಇದರ ನಿರ್ಮಾಪಕರಂತೆ.
'ಹಂಪಿ' ಬೇಡವೆಂದವರು...?
ಕೆಲ ತಿಂಗಳ ಹಿಂದಷ್ಟೇ ಇದೇ ರೀತಿ ಋಷಿ ಎಂಬ ಅರೆಬರೆ ನಿರ್ದೇಶಕ 'ಹಂಪಿ' ಎಂಬ ಚಿತ್ರ ಮಾಡೋದಾಗಿ ಹೇಳಿಕೊಂಡಿದ್ದರು. ಅಷ್ಟೇ ಹೇಳಿಕೊಂಡಿದ್ದರೆ, ದೊಡ್ಡ ವಿಷಯ ಆಗುತ್ತಿರಲಿಲ್ಲ. ಆ ಚಿತ್ರದಲ್ಲಿ ಅಮೂಲ್ಯರೇ ನಾಯಕಿ ಎಂದು ಸಾರಿ ಬಿಟ್ಟಿದ್ದರು. ನಂತರ ಗೊತ್ತಾಗಿದ್ದೇನೆಂದರೆ, ಆ ನಿರ್ದೇಶಕ ಅಮೂಲ್ಯ ಅಥವಾ ಅವರಿಗೆ ಸಂಬಂಧಪಟ್ಟ ಯಾರನ್ನೂ ಸಂಪರ್ಕಿಸಿರಲಿಲ್ಲ ಅನ್ನೋದು.
ಇದು ಗೊತ್ತಾಗುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದ ಅಮೂಲ್ಯ, ಸದ್ಯ ನಾನು ಚಿತ್ರರಂಗಕ್ಕೆ ಮರಳುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದರು. ಆದರೂ ಈಗ ಇನ್ನೊಬ್ಬ ಯುವ ನಿರ್ದೇಶಕ ಅಮೂಲ್ಯ ಹಿಂದೆ ಬಿದ್ದಿದ್ದಾರೆ.
ಆದರೆ ಈ ಬಾರಿ ಅಮೂಲ್ಯ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಿರುವ ಕಾರಣ, ಅಮೂಲ್ಯ ಹೆಸರಿನಲ್ಲಿರುವ ಏಕೈಕ ಹಿಟ್ ಚಿತ್ರದ (ಚೆಲುವಿನ ಚಿತ್ತಾರ) ನಾಯಕ ಗಣೇಶ್‌ಗೆ ಮತ್ತೆ ಜೋಡಿಯಾಗುವ ಅವಕಾಶ. ಅದರ ನಂತರ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸಾಲಜಿ ಎಂಬ ಚಿತ್ರಗಳಲ್ಲಿ ಹಾಡಿ-ಕುಣಿದರೂ ಪ್ರೇಕ್ಷಕರು ಕ್ಯಾರೇ ಅಂದಿರಲಿಲ್ಲ. ಗಣೇಶ್ ಅಲ್ಲದೆ ಬೇರೆ ಯಾರ ಜತೆ ಬಂದಾಗಲೂ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳಿವೆ.
'ಅದ್ಧೂರಿ'ಯನ್ನೂ ತಿರಸ್ಕರಿಸಿದ್ದರು...
ಕುತಂತ್ರಗಳಿಂದ ಬೇಸತ್ತು ಚಿತ್ರರಂಗದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದ ಅಮೂಲ್ಯ, ಬೇಡವೆಂದು ತಿರಸ್ಕರಿಸಿದ ಆಫರುಗಳಿಗೆ ಲೆಕ್ಕವಿಲ್ಲ. ಅವರಿವರೆನ್ನದೆ ಬಂದವರೆಲ್ಲರಿಗೂ ಆಕೆ ನೀಡಿದ ಉತ್ತರ ಒಂದೇ, ಅದು 'ನೋ'. ಈ ಸಾಲಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗುತ್ತಿರುವ 'ಅದ್ಧೂರಿ'ಯೂ ಸೇರಿದೆಯಂತೆ.
ಕೆಲವರಂತೂ ಭಾರೀ ಆಫರುಗಳನ್ನೇ ಅಮೂಲ್ಯ ಮುಂದಿಟ್ಟಿದ್ದರು. ರಮ್ಯಾರಂತಹ ದೊಡ್ಡ ನಟಿಯರಿಗೆ ಕೊಡುವಷ್ಟೇ ಸಂಭಾವನೆ ನಿಮಗೆ ಕೊಡುತ್ತೇವೆ ಎಂದವರೂ ಇದ್ದರು. ಹಲವರು 30 ಲಕ್ಷ ರೂಪಾಯಿ ಸಂಭಾವನೆಯ ಆಮಿಷ ತೋರಿಸಿದ್ದರು. ಆದರೆ ಇದ್ಯಾವುದಕ್ಕೂ ಅಮೂಲ್ಯ ತನ್ನ ನಿರ್ಧಾರ ಬದಲಿಸಿರಲಿಲ್ಲ.